ಬಾಳಿನ ಕನಸನ್ನು ಪೋಣಿಸುತ್ತಾ....

ಬಾಗ - 1 
ತಂಪಾಗಿ ಬೀಸುವ ತಂಗಾಳಿ, ಮನಸಿನ ಜಡವನ್ನು ಹೊಡೆದೋಡಿಸುವ ಹಕ್ಕಿಗಳ ಚಿಲಿಪಿಲಿ ಇಂಚರ,  ಮಲ್ಲಿಗೆ ಬಿರಿಯುವ ಪರಿಮಳ, ದಾಸವಾಳದ ಅಂದ, ಕೊಟ್ಟಿಗೆಯಲ್ಲಿ ಕರುವಿನ ಮನಮುಟ್ಟುವ 'ಅಂಬಾ' ಎನ್ನುವ ಸ್ವರ, ಅಂಗಳದಲ್ಲಿ ಕೋಳಿ ತನ್ನ ಮರಿಗಳೊಂದಿಗೆ ಕಾಳು ಹೆಕ್ಕುವ ಚಂದ, ಮೂಡಣ ಆಗಸದಲ್ಲಿ  ರಥವೇರಿ ಕೆಂಪು ರಂಗನ್ನು ಚೆಲ್ಲುತ್ತಾ ಬರುತ್ತಿರುವ ರವಿಯನ್ನು ತದೇಕಚಿತ್ತದಿಂದ ನೋಡುತ್ತಾ ಅಂಗಳದಲ್ಲಿ ನಿಂತಿದ್ದ ಪ್ರೇಮ್. ಮನದಲ್ಲಿ ನೂರಾರು ಕನಸುಗಳು. ಈಗ ತಾನೇ ಮೆಟ್ರಿಕ್ ನಲ್ಲಿ ತೇರ್ಗಡೆಗೊಂದು ಕಾಲೇಜು ವಿಧ್ಯಾಬ್ಯಾಸಕ್ಕಾಗಿ ದೂರದ ಮುಂಬಯಿಗೆ ಪಯಣಿಸಲು ಅಣಿಯಾಗುತ್ತಿದ್ದ ಪ್ರೇಮ್. ಮುಂಬಯಿಯ ಸಂಬಂದಿಯೊಬ್ಬರ ಮಾತಿನ ಮೇರೆಗೆ ಈ ಪಯಣ. ದಿನದಲ್ಲಿ ಕೆಲಸ ಮಾಡಿ ರಾತ್ರಿ ಕಾಲೇಜು ಮಾಡಿ ತನ್ನ ಕನಸನ್ನು ನನಸುಗೊಳಿಸಲು ಈ ದೂರದ ಪಯಣ ಅನಿವಾರ್ಯವಾಗಿತ್ತು. ಬಾಲ್ಯ ಸ್ನೇಹಿತರನ್ನು ಬಿಟ್ಟು ಯಾವುದೋ ಅರಿಯದ ನಾಡಿಗೆ ಹೋಗುವುದು ಸ್ವಲ್ಪ ಕಷ್ಟಕರವಾಗಿತ್ತು. ತಾನು ಬೆಳೆದ ಪರಿಸರದಲ್ಲಿ ಕಲ್ಲು ಮಣ್ಣು ಗಿಡ ಮರಗಳಲ್ಲಿ ಬೆರೆತುಹೋಗಿದ್ದ ಪ್ರೇಮನಿಗೆ ಕೇವಲ ನೆನಪುಗಳೊಂದಿಗೆ ಎಲ್ಲಾ ತೊರೆದು ಹೋಗಲು ಮನಸ್ಸು ರೋದಿಸುತ್ತಿತ್ತು. ಆಲೋಚನೆಗಳ ಸುಳಿಯಲ್ಲಿ ಮುಳುಗಿದ್ದ ಪ್ರೇಮ್ ನ ಹೆಗಲನ್ನು ಯಾರೋ ಮುಟ್ಟಿದಂತಾಗಿ ವಾಸ್ತವಕ್ಕೆ ಮರಳಿದ ಪ್ರೇಮ್. ಅಲ್ಲಿ ಅವನ ತಮ್ಮ ಸಂತೋಷ್ ನಿಂತಿದ್ದ. ಅವನಿಗೂ ಅಣ್ಣ ಮುಂಬಯಿಗೆ ಹೋಗುವುದು ಇಷ್ಟವಿರಲಿಲ್ಲ. ತನ್ನ ಹಳ್ಳಿಗೆ ಹತ್ತಿರದ ಪೇಟೆಯ ಪರಿಚಯ ಕೂಡಾ ಸರಿಯಾಗಿ ಗೊತ್ತಿಲ್ಲದ ಅಣ್ಣ ದೂರದ ಮುಂಬಯಿಗೆ ಹೋಗುವುದು ಆತನಿಗೆ ಬೇಸರವಾಗಿತ್ತು. ಬಾಳಿನ ಚಕ್ರ ಉರುಳುತ್ತಾ ಹೋದಂತೆ ನಾವೂ ಅದರೊಂದಿಗೆ ಸಾಗುವುದು ವಿಧಿ ನಿಯಮ. ಬೆಳಗ್ಗಿನ ಎಲ್ಲಾ ಕಾರ್ಯಗಳು ಮುಗಿದಂತೆ ಚಾ-ತಿಂಡಿಯ ಸೇವೆಯು ಆಗಿತ್ತು. ಇನ್ನೇನು ಹೊರಡಲು ಬಟ್ಟೆಬರೆ ಕಟ್ಟುವ ಕೆಲಸ ಸುರುವಾಯಿತು. ಅದರೊಂದಿಗೆ ತನ್ನ ಪರಿವಾರದ ಕೆಲವೊಂದು ಫೋಟೋಗಳನ್ನೂ, ಬೇಕಾಗಿರುವ ಪುಸ್ತಕಗಳನ್ನೂ ಚಿಕ್ಕ ಚೀಲದಲ್ಲಿ ಸೇರಿಸಿಯಾಗಿತ್ತು. ಮಧ್ಯಾಹ್ನದ ಬೋಜನದ ನಂತರ ಸಂಬಂದಿಯೊಂದಿಗೆ ಹೊರಡಲು ತಯಾರಿನಡೆದಿತ್ತು. ತಂದೆ ತಾಯಿಯ ಆಶೀರ್ವಾದ ಪಡೆದು ಅಕ್ಕ ತಮ್ಮನಿಗೆ ವಂದಿಸಿ ಸಿಮೆಂಟಿನ ಊರು ಮಾಯಾನಗರಿ ಮುಂಬಯಿಯತ್ತ ಮುಖ ಮಾಡಿದ್ದ ಪ್ರೇಮ್. 

ಬಾಗ - 2
ಕಣ್ಣಂಚಿನಲ್ಲಿ ಜಿನುಗಿದ ಕಣ್ಣೀರನ್ನು ಒರಸಿ, ಬಾಲ್ಯದ ಸವಿನೆನಪಿನ ಮಾಲೆಯನ್ನು ಕೊರಳಲ್ಲಿ ಧರಿಸಿ, ಅಂಗಳದಲ್ಲಿ ಆಡಿದ ಬಾಲ್ಯದ ಆಟಗಳ ನೆನಪಿನಲ್ಲಿ, ಮನೆಯವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಕಳೆದ ಕ್ಷಣಗಳನ್ನು ಹೃದಯದ ಗೂಡಲ್ಲಿ ಸ್ಥಾಪಿಸಿ ಕರ್ಮಭೂಮಿ ಮುಂಬಯಿಯ ಮಣ್ಣಿಗೆ ಬಂದಿಳಿದ ಪ್ರೇಮ್. ಅಬ್ಬಾ... ಎಂತಹ ಸುಂದರ ನಗರ. ಎಲ್ಲೆಲ್ಲೊ ಮುಗಿಲು ಮುಟ್ಟುವ ಕಟ್ಟಡಗಳು. ವರ್ಷಕ್ಕೊಮ್ಮೆ ನಡೆಯುವ ಊರಿನ ಜಾತ್ರೆಯಂತೆ ಎಲ್ಲೆಲ್ಲು ಜನಸಾಗರ, ವಾಹನಗಳ ಓಡಾಟ. ಒಂದು ಕಡೆಯಲ್ಲಿ ಖುಷಿಯಿದ್ದರೆ ಮತ್ತೊಂದು ಕಡೆಯಲ್ಲಿ ತನ್ನವರನ್ನು ಬಿಟ್ಟು ಬಂದ ದುಃಖ. ವಾಹನಗಳ ಮಧ್ಯದಿಂದ ರಸ್ತೆ ದಾಟಲು ಹೆದರಿಕೆ . ಕಿವಿಗಚ್ಚುವ ಹಾರನ್ ಗಳ ಆರ್ಭಟ. ಹೇಗೋ ಬಸ್ಸಿನಿಂದಿಳಿದು ರೈಲ್ವೆ ಸ್ಟೇಶನ್ ವರೆಗೆ ಸಾಗಿತು ಅವರ ಪಯಣ. ಸಂಬಂದಿಯ ಮನೆ ತಲುಪಲು ರೈಲಿನ ಮುಖಾಂತರ ಹೋಗಬೇಕಾಗಿತ್ತು. ಮೊತ್ತ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣ. ಶಾಲೆಗೆ ಹೋಗುವಾಗ ರೈಲ್ವೆ ಹಳಿ ದಾಟಿ ಹೋಗಬೇಕಾಗಿತ್ತು. ಒಮ್ಮೊಮ್ಮೆ ಅದೇ ಸಮಯಕ್ಕೆ ರೈಲು ಬಂದರಂತೂ ಖುಷಿಯೋ ಖುಷಿ. ರೈಲ್ವೆ ಕ್ರಾಸಿಂಗ್ ನ ಹತ್ತಿರ ನಿಂತು ರೈಲಿನಲ್ಲಿರುವವರಿಗೆ ಟಾಟಾ ಮಾಡುವುದೆಂದರೆ ಎಲ್ಲಿಲ್ಲದ ಸಂತೋಷ. ಗೆಳೆಯರೆಲ್ಲರೂ ಕೇಕೆಹಾಕುತ್ತಾ ಸಂಭ್ರಮಿಸುತ್ತಿದ್ದ ನೆನಪು ಪ್ರೇಮ್ ನ ಕಣ್ಣಂಚಿನಲ್ಲಿ ಸುಳಿದೋಯಿತು. ಅದೇ ಹೊತ್ತಿಗೆ ರೈಲು ಬಂದಿತು. ಆದರೆ ಅದು ಊರಿನಲ್ಲಿ ನೋಡಿದ ರೈಲಿನಂತಿರಲ್ಲ. ದೊಡ್ಡ ಬಾಗಿಲು ಚಿಕ್ಕ ರೈಲು. ಹೊಸ ಊರು ಹೊಸ ಹಿಂದಿ ಜನರು. ಎಲ್ಲವೂ ವಿಚಿತ್ರವಾಗಿತ್ತು. ರೈಲು ಹತ್ತಿ ಮನೆ ತಲುಪಿದೆವು. ಸ್ವಾಗತವೂ ಚೆನ್ನಾಗಿ ನಡೆಯಿತು. ಮುಂಬಯಿ ಬದುಕಿನ ಅದ್ಯಾಯದ ಮೊದಲ ದಿನದ ಪುಟ ತೆರೆಯಿತು. 

ಬಾಗ - 3
ಒಂದೆರಡು ದಿನ ಕಳೆದು ಸಂಬಂದಿಕರ ಕಚೇರಿಯಲ್ಲಿ ಹಗಲಲ್ಲಿ ಕೆಲಸಕ್ಕೆ ಸೇರಿದ ಪ್ರೇಮ್. ಅದರೊಂದಿಗೆ ರಾತ್ರಿ ಕಾಲೇಜಿನ ನೋಂದಣಿಯು ಸಿಕ್ಕಿತ್ತು. ಮೊದಮೊದಲಿಗೆ ಎಲ್ಲವೂ ಚೆನ್ನಾಗಿ ಸಾಗಿತ್ತು. ಸ್ವಲ್ಪ ದಿನ ಕಳೆದಾಗ ಕೆಲವೊಂದು ಕಡೆ ಬಿನ್ನಾಭಿಪ್ರಾಯ ತಲೆಎತ್ತಲು ಸುರುವಾಯಿತು. ಮನಸ್ಸು ನೊಂದು ಕಣ್ಣೀರು ಹರಿಸಿತು. ಮನೆಯವರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ದಿನಗಳು ಅದೆಸ್ಟಿವೆಯೊ??? ಹಗಲಲ್ಲಿ ದುಡಿದು ರಾತ್ರಿ ಕಾಲೇಜಿಗೆ ಹೋಗುವಾಗ ದಣಿವು ಆವರಿಸುತ್ತಿತ್ತು. ಅರ್ಥಶಾಸ್ತ್ರದ ಕ್ಲಾಸಿನಲ್ಲಿ ಕೆಲವೊಮ್ಮೆ ನಿದ್ರಿಸಿದ ಸಂದರ್ಭವೂ ಇತ್ತು. ಕಾಲೇಜಿನಲ್ಲಿ ಕೆಲವೊಂದು ಉತ್ತಮ ಗೆಳೆಯರ ಒಡನಾಟದೊಂದಿಗೆ ತನ್ನ ನೋವನ್ನು ಮರೆತು ಸಂತೋಷದಿಂದಿರಲು ಪ್ರಯತ್ನಿಸುತ್ತಿದ್ದ ಪ್ರೇಮ್. ಅಭ್ಯಾಸದೊಂದಿಗೆ ಕೆಲವು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಬೆರೆಯುತ್ತಾ ಶಾಲೆಯಲ್ಲಿ ಉತ್ತಮ ವಿಧ್ಯಾರ್ಥಿಯೆಂಬ ಹೆಗ್ಗಳಿಕೆಯೊಂದಿಗೆ ಸಾಗಿತ್ತು ಜೀವನ. ಕಾಲಚಕ್ರ ಉರುಳುತ್ತಾ ಹೋದಂತೆ ಹಲವಾರು ಘಟನೆಗಳೊಂದಿಗೆ ತನ್ನನ್ನು ಹೊಂದಿಸಿಕೊಂಡು, ಸಾವರಿಸಿಕೊಂಡು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ. ತನ್ನ ಸ್ವಾರ್ಥ ಸಾದನೆಗಾಗಿ ಮುಂಬಯಿಗೆ ಕರೆತಂದು ದುಡಿಸಿದವರ ಮೇಲೆ ಪ್ರೇಮ್ ಗೆ ರೋಷವುಕ್ಕಿತ್ತು. ಇನ್ನು ಮುಂಬಯಿ ಜೀವನ ಸಾಕು ಗಂಜಿ ನೀರು ಕುಡಿದರೂ ಊರೇ ಸಾಕು ಎಂದು ಊರಿಗೆ ಹೋಗಲು ತಯಾರಿ ನಡೆಸಿದ. ಯಾವುದೇ ಸಂಬಳ ತೆಗೆದುಕೊಳ್ಳದೆ ಎರಡು ವರ್ಷ ಸಂಬಂದಿಕರ ಕಚೇರಿಯಲ್ಲಿ ದುಡಿದು ತನ್ನ ಊರಿಗೆ ಹಿಂತಿರುಗುವಾಗ ಅವರು ಕೊಟ್ಟ ಜುಜುಬಿ ಸಾವಿರ ರೂಪಾಯಿ ಹಣವನ್ನು ನೋಡಿ ದುಃಖಿಸಿದ ಪ್ರೇಮ್. ಬಾಹ್ಯ ಸಂಬಂದದೊಂದಿಗೆ ಅಂತರಂಗದ ಸಂಬಂದವೂ ಮುರಿದು ಬಿದ್ದಿತ್ತು. ಪ್ರಶ್ನಿಸಿದಕ್ಕೆ ಉಟೋಪಚಾರದ ಮತ್ತು ರಾತ್ರಿ ಕಾಲೇಜಿನ ಖರ್ಚು ತೆಗೆದು ಅಷ್ಟೆ ಉಳಿಯುವುದು ಎಂಬ ಉತ್ತರವೂ ತಯಾರಿತ್ತು. ಆಗಲೇ ಅರಿವಾದದ್ದು ನಮ್ಮವರು ಎಂಬುದು ಬರಿ ಸುಳ್ಳು ಎಲ್ಲರೂ ಅವರವರ ಸ್ವಾರ್ಥ ಸಾದನೆಗಾಗಿ ಯಾರನ್ನು ಉಪಯೋಗಿಸಲು ಹಿಂಜರಿಯುವುದಿಲ್ಲವೆಂಬುದು. ತಾನು ಉಳಿಸಿದ್ದು ಎಂಬುದು ಏನೂ ಇಲ್ಲ ಯಾಕೆಂದರೆ ಸಂಬಳವಿಲ್ಲದೆ ದುಡಿದವ. ಮಾಡಿದ ಕೆಲಸಕ್ಕೆ ಸಂಭಾವನೆ ಕೊಡಲಾಗದವರು ಯಾಕೆ ದುಡಿಸಿಕೊಳ್ಳಬೇಕು. ಇಂತಹ ಬದುಕು ಯಾರಿಗೂ ಬರಬಾರದು ಎಂದು ತನ್ನೊಳಗೆ ಪ್ರಾರ್ಥಿಸಿದನಗೆ ಸಿಕ್ಕಿದ ಒಂದೆರಡು ಸಾವಿರ ರೂಪಾಯಿಯನ್ನು ಹಿಡಿದು ಬೇಸರದಿಂದ ಊರಿನ ಹಾದಿ ಹಿಡಿದ ಪ್ರೇಮ್.  

ಬಾಗ - 4
ಹಚ್ಚನೆ ಹಸಿರಲಿ ನಲಿಯುತ್ತಿದ್ದ ತನ್ನ ಊರಿನ ಸಂಭ್ರಮ ನೋಡಿ ತನ್ನ ನೋವನ್ನೆಲ್ಲ ಮರೆತು ಮನೆ ಸೇರಿದ ಪ್ರೇಮ್.  ಪಟ್ಟಣದ ಯಾಂತ್ರಿಕ ಜೀವನದಿಂದ ಪುನಃ ಹಳ್ಳಿ ಬದುಕಿನತ್ತ ಮುಖ ಮಾಡಿತ್ತು ಮನಸ್ಸು. ತನ್ನ ಸಂಬಂದಿಕ ಕೊಟ್ಟ ಒಂದೆರಡು ಸಾವಿರ ರೂಪಾಯಿ ಹಣವನ್ನು ಹಾಗೆಯೇ ತಂದೆಯ ಕೈಗಿತ್ತ ಪ್ರೇಮ್. ಮುಂಬಯಿಯಲ್ಲಿ ಎರಡು ವರ್ಷ ದುಡಿದು ತನ್ನ ಮಗನಿಗೆ ದೊರೆತ ಜುಜುಬಿ ಕಾಸನ್ನು ನೋಡಿ ಹೆತ್ತ ಹೃದಯ ದುಃಖಿಸಿತು. ಯಾರಲ್ಲಿ ಕೇಳುವುದು ಯಾರಲ್ಲಿ ಹೇಳುವುದು ಯಾರಲ್ಲಿ ಜಗಳ ಮಾಡುವುದು ದುಡಿಸಿದವ ಸಂಬಂದಿಕ. ಮುಂಬಯಿಯಲ್ಲಿ ದೊಡ್ಡ ದಣಿ ಎಂಬ ಹೆಸರಿನ ಅಸಾಮಿ. ಮನೆಯವರ ಸಾಂತ್ವನದೊಂದಿಗೆ ಹಳ್ಳಿ ಬದುಕಿನ ಅದ್ಯಾಯ ಮುಂದುವರಿಯಿತು. ಮುಂಬಯಿಯಿಂದ ಬಂದ ಕೆಲವು ದಿನಗಳು ಉತ್ತಮವಾಗಿ ಉರುಳಿದರೂ ಚಿಕ್ಕ ಪುಟ್ಟ ತಕರಾರು ಅಲ್ಲಿಯೂ ಸುರುವಾಯಿತು. ಪ್ರೇಮ್ ಮನೆಯಲ್ಲಿ ಕುಳಿತುಕೊಳ್ಳದೆ ಕೆಲಸದ ಹುಡುಕಾಟದಲ್ಲಿ ಊರೂರು ಸುತ್ತಲಾರಂಬಿಸಿದ. ತಕ್ಷಣ ಕೆಲಸ ಸಿಗದೆ ಇದ್ದ ಕಾರಣ ಮನೆಯಲ್ಲಿಯೂ ಮೂದಲಿಕೆಯ ಮಾತು ಕೇಳಲಾರಂಬಿಸಿತು. ಮುಂಬಯಿಯಿಂದ ಹಿಂತಿರುಗಿದ ಸಂದರ್ಭದಲ್ಲಿ ತನ್ನ ಮಗನ ಮೇಲೆ ಅಪಾರ ಕಾಳಜಿಯ ಮಾತುಗಳನ್ನಾಡಿದ್ದ ಪಾಲಕರ ಕೊಂಕು ನುಡಿಗಳು ಪ್ರೇಮ್ ನನ್ನು ಬಹಳ ಚುಚ್ಚಿತು. ಏನು ಮಾಡುವುದು ಕೈಯಲ್ಲಿ ಹಣವಿಲ್ಲ, ಇದ್ದ ಹಣವೆಲ್ಲ ತಂದೆಗೆ ಕೊಟ್ಟಾಗಿದೆ, ಎತ್ತ ಹೋದರೂ ಸರಿಯಾದ ಕೆಲಸ ಸಿಗುತ್ತಿಲ್ಲ. ಮನೆಯವರ ಚುಚ್ಚುವ ಮಾತುಗಳನ್ನು ಕೇಳಲಾಗದೆ 'ಕೆಲಸ ಸಿಗದಿದ್ದರೆ ಮನೆಗೆ ಹಿಂತಿರುಗುವುದಿಲ್ಲ' ಎಂದು ಮನದಲ್ಲಿ ದೃಡ ನಿಶ್ಚಯ ಮಾಡಿ ಒಂದು ದಿನ ಮನೆಯಿಂದ ಹೊರಟ ಪ್ರೇಮ್. ಸಿಕ್ಕಿದ ಯಾವ ಕೆಲಸವಾದರೂ ಸರಿ ಸೇರುತ್ತೇನೆ ಎಂದು ಅಂಗಡಿ, ಹೋಟೆಲ್, ಬಾರ್ ಹೀಗೆ ಸುತ್ತಲಾರಂಬಿಸಿದ ಪ್ರೇಮ್. ಒಂದು ಬಾರ್ ನಲ್ಲಿ ಹೋದಾಗ ಅಲ್ಲಿ ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದು ತನ್ನ ಬಗ್ಗೆ ಅವರಿಗೆ ತಿಳಿಸಿದಾಗ ಅಲ್ಲಿಯೇ ನಿಂತಿದ್ದ ಒಬ್ಬ ಮಹಾನುಭಾವ ಇವನ ವಿಧ್ಯಾಭ್ಯಾಸ ನೋಡಿ ಅವನನ್ನು ತನ್ನ ಪರಿಚಯದ ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ ಕೆಲಸ ಕೊಡಿಸಿದ. ವಾರಕ್ಕೆ ಇನ್ನೂರೈವತ್ತು ರೂಪಾಯಿಗಳ ಸಂಭಾವನೆಯ ಮೇರೆಗೆ ಆ ಅಂಗಡಿಯಾತ ಪ್ರೇಮ್ ನನ್ನು ಕೆಲಸಕ್ಕೆ ಸೇರಲು ತಿಳಿಸಿದ. ಅಲ್ಲಿಂದ ಪ್ರೇಮ್ ನ ಜೀವನದ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಬಹಳ ನಿಷ್ಠೆಯಿಂದ ಆ ಅಂಗಡಿಯಲ್ಲಿ ಕೆಲಸ ಮಾಡಲು ಸುರು ಮಾಡಿದ. ವಾರದಲ್ಲಿ ಬಂದ ಇನ್ನೂರೈವತ್ತರಲ್ಲಿ ಐವತ್ತು ತನ್ನ ಬಸ್ಸು ಚಾರ್ಜಿಗೆ ಇಟ್ಟು ಉಳಿದ ಹಣವನ್ನು ತಪ್ಪದೆ ತಂದೆಯ ಕೈಗೆ ಕೊಡಲಾರಂಬಿಸಿದ. ಅಲ್ಲಿಯೂ ಮನೆಯವರ ಪ್ರೋತ್ಸಾಹ ಆತನಿಗೆ ಸಿಗಲಿಲ್ಲ. ಅಂಗಡಿ ತೆರೆಯಲು ಬೆಳಿಗ್ಗೆ ಬೇಗ ಹೋಗಬೇಕಾದ ಕಾರಣ ಮನೆಯ ಕೆಲಸ ಮಾಡಲಾಗುತ್ತಿರಲಿಲ್ಲ. ಬೆಳಿಗ್ಗೆ ಏಳು ಗಂಟೆಗೆ ಮನೆ ಬಿಟ್ಟರೆ ರಾತ್ರಿ ಎಂಟರ ನಂತರ ಮನೆಗೆ ತಲುಪುತ್ತಿದ್ದ ಕಾರಣ ಮನೆಯಲ್ಲಿ ದಿನನಿತ್ಯದ ಕೆಲಸಗಳಲ್ಲಿ ಕೈಜೋಡಿಸಲು ಸಾದ್ಯವಿರಲಿಲ್ಲ. ಆದರೆ ಮನೆಯವರಿಗೆ ಅದರ ಗೊಡವೆಯಿರಲಿಲ್ಲ. ದಿನನಿತ್ಯದ ಕೆಲಸಗಳಲ್ಲಿ ಕೈಜೋಡಿಸುವುದಿಲ್ಲ ಎಂಬ ತಕರಾರು ಪ್ರತಿದಿನ ಸುಪ್ರಬಾತದಂತೆ ಕೇಳಲಾರಂಬಿಸಿತು. ದಿನಾಲೂ ಇವರ ಚುಚ್ಚು ಮಾತು ಕೇಳಿ ಕೇಳಿ ಮನಸ್ಸು ಅಲ್ಲೋಲಕಲ್ಲೋಲವಾಯಿತು. ದುಡಿದು ಮನೆಗೆ ಹಣ ಕೊಟ್ಟರೂ ನೆಮ್ಮದಿ ಇಲ್ಲದಿದ್ದರೆ ಏನು ಪ್ರಯೋಜನ??  ಯಾವಾಗ ನೋಡಿದರೂ ಮನೆಯಲ್ಲಿ ಜಗಳ ತಪ್ಪಲಿಕ್ಕಿಲ್ಲ. ಮನೆಯೇ ದೇವಾಲಯ ಎನ್ನುವ ಮಾತು ಸುಳ್ಳಾಯಿತು. ಬದುಕು ನರಕವಾಯಿತು. ಪ್ರತಿಯೊಬ್ಬರಿಗೆ ಶಾಪ ಕೊಡುತ್ತಾ, ಜಗಳ ಮಾಡುತ್ತಾ,  ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗದ ಇಂತಹ ಮನೆಯಲ್ಲಿ ಇರುವುದಕ್ಕಿಂತ ಮನೆಯಿಂದ ದೂರ ಇರುವುದೇ ಲೇಸು ಎಂದೆನಿಸಿತು ಪ್ರೇಮ್ ಗೆ. ಸಮಯದೂಡುತಲ್ಲಿದ್ದ ಅವನಿಗೆ ಪುನಃ ಮುಂಬಯಿಗೆ ಹೋಗುವ ಒಂದು ಅವಕಾಶ ದೊರಕಿತು. ಈ ಸಲ ತಿರುಗಿ ಮನೆಗೆ ಬರುವುದಿಲ್ಲ ಎಂದು ಯೋಚಿಸಿ ಮುಂಬಯಿಯತ್ತ ತನ್ನ ಅದೃಷ್ಟ ಪರೀಕ್ಷೆಗೆ ಹೊರಟ ಪ್ರೇಮ್. 

ಬಾಗ - 5
ಮುಂಬಯಿಯ ಬದುಕಿನ ಎರಡನೇ ಅದ್ಯಾಯದೊಂದಿಗೆ ಮರಾಠಿ ಮಣ್ಣಿಗೆ ಕಾಲಿಟ್ಟ ಪ್ರೇಮ್. ಈ ಸಲ ಯಾರ ಹಂಗೂ ಇಲ್ಲದೆ ತನ್ನ ಸ್ವಂತ ನೆಲೆ ಮಾಡಬೇಕೆಂಬ ಮಹಾದಾಸೆಯನ್ನಿಟ್ಟು ಬಂದಿದ್ದ. ಮುಂಬಯಿಗೆ ಬರುವುದು ಸುಲಭ ಆದರೆ ಇಲ್ಲಿ ನೆಲೆಸುವುದು ತುಂಬಾ ಕಷ್ಟ. ನಿಲ್ಲಲು ಮಲಗಲು ಜಾಗದ ಕೊರತೆಯಿಂದ ಹೋಟೆಲ್ ಕ್ಯಾಂಟೀನ್ ಗಳಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಪ್ರೇಮ್ ಕೂಡಾ ಒಂದು ಕ್ಯಾಂಟೀನ್ ನಲ್ಲಿ ಕೆಲಸಕ್ಕೆ ಸೇರಿದ. ಕ್ಯಾಂಟೀನ್ ನಲ್ಲಿ ಚಿಕ್ಕ ಕೆಲಸಕ್ಕೆ ಸೇರಿದ ಪ್ರೇಮ್ ತನ್ನ ಪ್ರಾಮಾಣಿಕವಾದ ಕೆಲಸದಿಂದ ಮ್ಯಾನೇಜರ್ ಹುದ್ದೆಯವರೆಗೆ ಬಹಳ ಬೇಗ ತಲುಪಿದ. ಇಲ್ಲಿ ಹಲವಾರು ಕಂಪನಿಯ ಉನ್ನತ ಹುದ್ದೆಯಲ್ಲಿದ್ದವರ ಪರಿಚಯ ಅವನಿಗಾಯಿತು. ಅವನ ಕೆಲಸ ಮೆಚ್ಚಿ ಒಬ್ಬ ಅಧಿಕಾರಿ ನೀನೆ ನಿನ್ನದೇ ಸ್ವಂತ ಉದ್ಯಮ ಯಾಕೆ ಮಾಡಬಾರದು ಎಂದು ಸಲಹೆ ಕೊಟ್ಟ. ಮಾಡುವುದಾದರೆ ಕಂಪನಿಯ ಇನ್ನೊಂದು ಹೊಸ ಘಟಕದ ಕ್ಯಾಂಟೀನ್ ನೀನೆ ನಡೆಸು ಮತ್ತು ಅದನ್ನು ನಿನಗೆ ಕೊಡುತ್ತೇನೆಂದು ಭರವಸೆ ಕೊಟ್ಟ. ಅವನ ಮಾತಿನಂತೆ ಪ್ರೇಮ್ ತನ್ನ ಸ್ವಂತ ಉದ್ಯಮದತ್ತ ಒಲವು ತೋರಿಸಿದ. ತನ್ನ ಒಬ್ಬ ಮಿತ್ರನ ಸಹಾಯದಿಂದ ಸ್ವಂತ ಉದ್ಯಮಕ್ಕೆ ಚಾಲನೆ ಕೊಟ್ಟ. ಉದ್ಯಮ ಚಿಕ್ಕದಾದರೂ ಮುಂದೊಂದು ದಿನ ದೊಡ್ಡ ಮಟ್ಟಕ್ಕೆ ಬೆಳೆಯಬಹುದೆಂಬ ದೂರಾಲೋಚನೆಯಲ್ಲಿ ಶ್ರಮವಹಿಸಿ ಕೆಲಸ ಮಾಡಲಾರಂಬಿಸಿದ. ಹಲವಾರು ವರ್ಷ ತನ್ನ ಉದ್ಯಮವನ್ನು ವ್ಯಾಪಿಸಿಕೊಳ್ಳುತ್ತಾ ಮನೆಯವರ ಮನಸ್ತಾಪಗಳನ್ನು ಮರೆತು ಎಲ್ಲರೊಂದಿಗೆ ಬೆರೆತು ಬದುಕು ರೂಪಿಸುವಲ್ಲಿ ಮಗ್ನನಾಗಿದ್ದ. ವ್ಯಾಪಾರದ ಹಲವಾರು ಮಜಲುಗಳಲ್ಲಿ ಬೇರೆ ಬೇರೆ ವ್ಯಕ್ತಿಗಳೊಂದಿಗೆ ಉತ್ತಮ ಸಂಬಂಧ ಬೆಸೆಯುತ್ತಾ, ಉದ್ಯಮವನ್ನು ವಿಸ್ತರಿಸಲಾರಂಬಿಸಿದ. ತನ್ನ ಒಬ್ಬ ಮಿತ್ರ ರಾಕೇಶ್ ನಿಗೆ ಸಹಾಯ ಮಾಡಲೆಂದು ಹೊಸದಾಗಿ ಇನ್ನೊಂದು ಉದ್ಯಮ ಪ್ರಾರಂಬಿಸಿ, ಉದ್ಯಮದ ಸಂಪೂರ್ಣ ಬಂಡವಾಳ ಹಾಕಿ ಆತನಿಗೆ ನಡೆಸಲು ಕೊಟ್ಟ. ಕೆಲಸ ಕಾರ್ಯ ಕಳೆದುಕೊಂಡು ಬರಿಗೈಯಲ್ಲಿದ್ದ  ರಾಕೇಶ್ ನನ್ನು ಸಂತೈಸಿ ಆತನಿಗೆ ನಿಲ್ಲಲು ಆಸರೆ ಕೊಟ್ಟು, ಉಣ್ಣಲು ಅನ್ನ ಕೊಟ್ಟು, ತಾನೇ ಬಂಡವಾಳ ಹಾಕಿ ಹೊಸ ಉದ್ಯಮ ಹಸ್ತಾಂತರಿಸಿದ. ಮೊದಲಿನ ಕೆಲವು ತಿಂಗಳು ಯಾವುದೇ ಬಾಡಿಗೆ ಕೇಳದೆ ಸುಮ್ಮನ್ನಿದ್ದ ಪ್ರೇಮ್. ಆದರೆ ರಾಕೇಶ್ ಇವನ ನಂಬಿಕೆಯನ್ನು ಉಳಿಸಲಿಲ್ಲ. ಪಾಪ ಪುಣ್ಯ ನೋಡಿ ಕರೆತಂದು ತನ್ನ ಪಾದಕ್ಕೆ ತಾನೇ ಕೊಡಲಿ ಬಾರಿಸಿದಂತಾಗಿತ್ತು ಪ್ರೇಮ್ ನ ಸ್ಥಿತಿ. ಭರವಸೆಯಿಂದ ಕೊಟ್ಟ ಉದ್ಯಮವನ್ನು ಸರಿಯಾಗಿ ನೋಡದೆ, ಕೆಲಸ ಮಾಡುವವರಿಗೆ ಸಂಬಳ ಕೊಡದೆ, ಬಂದ ಹಣವನ್ನು ತನ್ನ ಮೋಜಿನಲ್ಲಿ ಉಡಾಯಿಸಿ ಪ್ರೇಮ್ ಇಟ್ಟ ನಂಬಿಕೆಗೆ ದ್ರೋಹ ಬಗೆದಿದ್ದ ರಾಕೇಶ್. ಒಂದು ದಿನ ರಾಕೇಶ್ ಗೆ ಅದರ ಬಗ್ಗೆ ವಿಚಾರಿಸಿದಾಗ ತನ್ನ ಸ್ವಂತ ಉದ್ಯಮದಂತೆ ವರ್ತಿಸಿ ನೀನು ಯಾರು ಕೇಳಲು ಎಂದು ಎದುರುತ್ತರ ಕೊಟ್ಟ ಆ ಮಹಾನುಭಾವ. ಕಷ್ಟದಲ್ಲಿದ್ದ ಮಿತ್ರನಿಗೆ ಸಹಾಯ ಮಾಡಲು ಹೋಗಿ ಆತ ಮಾಡಿದ ಸಾಲವನ್ನು ಪ್ರೇಮ್ ನೇ ಬರಿಸಬೇಕಾಯಿತು. ಇಂತಹ ದ್ರೋಹಿ ಜನರಿಗೆ ಒಳಿತು ಬಯಸುವುದು ಸರಿಯಲ್ಲವೆಂದು ತಿಳಿದ ಪ್ರೇಮ್ ತನ್ನ ಉದ್ಯಮವನ್ನು ವಾಪಸ್ ಪಡೆದು ರಾಕೇಶ್ ಗೆ ಗುಡ್ ಬೈ ಹೇಳಿದ. 

ಬಾಗ - 6
ಈ ಉದ್ಯಮದೊಂದಿಗೆ ತನ್ನ ಪರಿಚಯದವನ ಸಲಹೆಯ ಮೇರೆಗೆ ಮತ್ತೊಂದು ಉದ್ಯಮದತ್ತ ಕಾಲಿಟ್ಟ. ಸುರುವಿಗೆ ಉತ್ತಮವಾಗಿ ಮೂಡಿಬಂದ ಆ ಉದ್ಯಮ ನಂಬಿ ಕೈಜೋಡಿಸಿದವರ ಬೇಜವಾಬ್ದಾರಿತನದಿಂದ ಕ್ರಮೇಣ ವಿನಾಶದತ್ತ ಸಾಗಿತು. ಈ ಉದ್ಯಮದಲ್ಲಿ ಸರಿಯಾಗಿ ಅರಿವಿಲ್ಲದೆ ತನ್ನ ಪರಿಚಯಸ್ತ ಹೇಳಿದಂತೆ ಬಂಡವಾಳ ಹೂಡುತ್ತಾ ಹೋದ ಪ್ರೇಮ್. ಉದ್ಯಮ ಬೆಳೆಸಲು ಬಂಡವಾಳ ಹೂಡಿಕೆ ಅಗತ್ಯವಿತ್ತು. ಅದೇ ಸಮಯದಲ್ಲಿ ವಿಪರೀತ ಬೆಲೆ ಏರಿಕೆಯ ಕಾರಣ ಕ್ಯಾಂಟೀನ್ ಉದ್ಯಮ ತತ್ತರಿಸಿಹೋಗಿತ್ತು. ಕಂಪನಿಯವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸಬೇಕಾಗಿತ್ತು. ಬೆಲೆ ಏರಿಕೆಯ ಕಾರಣ ಅಷ್ಟೊಂದು ಕಡಿಮೆ ದರದಲ್ಲಿ ಆಹಾರ ಪೂರೈಸುವುದು ಸಾದ್ಯವಿರಲಿಲ್ಲ. ಆದರೂ ಹಲವಾರು ಸಲ ಅಧಿಕಾರಿಗಳಿಗೆ ವಿನಂತಿಸಿದ್ದ ಪ್ರೇಮ್. ಯಾವುದೇ ಸಕಾರಾತ್ಮಕ ಪ್ರತಿಕ್ರೀಯೆ ಸಿಗದ ಕಾರಣ ಕ್ಯಾಂಟೀನ್ ಉದ್ಯಮವನ್ನು ಕೈಬಿಟ್ಟ ಪ್ರೇಮ್. ಈ ಉದ್ಯಮವನ್ನು ಬೆಳೆಸಲು ತಾನು ಪಟ್ಟ ಶ್ರಮ ನೀರಿನಲ್ಲಿ ಹೋಮವಿಟ್ಟ ಹಾಗಾಯಿತು. ಆದರೆ ದೃತಿಗೆಡದೆ ತಾನು ಪ್ರಾರಂಬಿಸಿದ ಹೊಸ ಉದ್ಯಮದಲ್ಲಿ ಮುಂದುವರಿಯುವ ಯೋಜನೆ ಹಾಕಿ ಅದನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾದ ಪ್ರೇಮ್. ಆದರೆ ವಿಧಿ ಇಲ್ಲಿಯೂ ಇವನಿಗೆ ಮುನಿಯಿತು. ತಾನು ಯಾರೊಂದಿಗೆ ಉದ್ಯಮ ಪ್ರಾರಂಬಿಸಿದನೋ ಆ ವ್ಯಕ್ತಿ ಹಾಕಿದ ಬಂಡವಾಳವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿ ಕೈ ಮೇಲೆ ಮಾಡಿ ನಿಂತಿದ್ದ. ಏನು ಮಾಡುವುದು ಜಗಳ ಮಾಡಿದರೆ ಹಣ ಹಿಂತಿರುಗಿ ಬರುವುದೇನು?? ಇಲ್ಲ ... ಯಾರನ್ನು ನಂಬಲಿ ಯಾರನ್ನು ಬಿಡಲಿ.. ಮೋಸ, ವಂಚನೆ, ವಿಶ್ವಾಸದ್ರೋಹ, ಮಾನವೀಯತೆ ಇಲ್ಲದ ಜನರು.  ಮಿತ್ರ, ಸಂಬಂದಿ ಎಂದು ತೋರಿಸಿದ ಸಲಿಗೆಯನ್ನು ದುರುಪಯೋಗ ಪಡಿಸಿ ಒಬ್ಬ ವ್ಯಕ್ತಿಯ ಜೀವನ ನಾಶ ಮಾಡಿದ ಪಾಪಿಗಳು. ಒಂದು ಕಡೆಯಲ್ಲಿ ವ್ಯಾಪಾರ ಸಂಪೂರ್ಣ ಸ್ಥಗಿತವಾಯಿತು ಇನ್ನೊಂದೆಡೆ ವಿಶ್ವಾಸದ್ರೋಹದಲ್ಲಿ ಮಾನಸಿಕವಾಗಿ  ನೊಂದುಹೋದ ಪ್ರೇಮ್. ಮುಟ್ಟಿದ ಕೆಲಸಗಳೆಲ್ಲವೂ ಮಣ್ಣಾಗಿ ಹೋದ ಸಂದರ್ಭದಲ್ಲಿ ಇದಕ್ಕೆಲ್ಲ ಮನೆಯವರ ಆಂತರಿಕ ಕಲಹವೇ ಕಾರಣ, ಇದರಿಂದಾಗಿ ಉನ್ನತಿ ಇಲ್ಲ ಎಂದು ಅವನ ಮನದಲ್ಲಿ ಮೂಡಿತು. ಅದಕ್ಕೆ ಕಾರಣವೂ ಉಂಟು ಊರಿನಲ್ಲಿ ಮನೆಕಲಹವನ್ನು ಬಗೆಹರಿಸುವ ಸಂದರ್ಭದಲ್ಲಿ ಕೇಳಿದ ಪ್ರಶ್ನೆಯಲ್ಲಿ ಸಿಕ್ಕಿದ ಉತ್ತರ 'ಯಾರೇ ಆಗಲಿ ಒಂದು ಸೂರಿನಡಿಯಲ್ಲಿ ಒಬ್ಬರಿಗೊಬ್ಬರು ದೂಷಿಸುತ್ತಾ, ಕಚ್ಚಾಡುತ್ತಾ, ಶಾಪ ಹಾಕುತ್ತಾ ಇದ್ದರೆ ಆ ಮನೆಯಿಂದ ಯಾರೇ ಹೊರಗೆ ಇದ್ದು ಕೆಲಸ ಕಾರ್ಯ ಮಾಡುತ್ತಿದ್ದರೆ ಅವರಿಗೆ ಕೂಡಾ ಏಳಿಗೆ ಇಲ್ಲ' . ಈ ಮಾತನ್ನು ಕೇಳಿಯೂ ಮನೆಯಲ್ಲಿ ಕಲಹ ತಪ್ಪಿರಲಿಲ್ಲ. ಚಿಕ್ಕಂದಿನಿಂದಲೂ ದ್ವೇಷ ಭಾವನೆಯ ಪರಿಸರದಲ್ಲಿ ಬೆಳೆದ ಪ್ರೇಮ್, ಪ್ರೀತಿಗಾಗಿ ಹಂಬಲಿಸುತ್ತಾ, ಸಹಾಯ ಬೇಡಿಬಂದವರಿಗೆ ತನ್ನಿಂದಾದ ಸಹಾಯ ಮಾಡುತ್ತಾ, ಕ್ಷಣಿಕ ಪ್ರೀತಿಗಾಗಿ ಹಂಬಲಿಸಿದ್ದೆ ಹೆಚ್ಚು. ತನಗೆ ತಿನ್ನಲು ಇಲ್ಲದಿದ್ದರೂ ಸಹಾಯ ಬೇಡಿ ಬಂದವರಿಗೆ ಹೊಟ್ಟೆ ತುಂಬ ಊಟ ಹಾಕುತಿದ್ದ ಪರೋಪಕಾರಿ. ತನ್ನಿಂದ ಇನ್ನೊಬ್ಬರ ಮುಖದಲ್ಲಿ ಮೂಡುವ ನಗುವನ್ನು ನೋಡುತ್ತಾ ಸಂತೋಷದ ಕಡಲಲ್ಲಿ ತೇಲುತ್ತಿದ್ದ ವ್ಯಕ್ತಿತ್ವ. ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ತನ್ನ ಜೀವನವನ್ನು ದೀನ ದಲಿತರ ಏಳಿಗೆಗಾಗಿ ಮೀಸಲಿಡಬೇಕೆಂಬ ಸಾಮಾಜಿಕ ಕಳಕಳಿಯುಳ್ಳ ವಿಚಾರ ತುಂಬಿದ ಮನುಷ್ಯ ಪ್ರೇಮ್.  ತಾನು ಕೂಡಾ ಎಲ್ಲರಂತೆ ತುಂಬು ಪರಿವಾರದ ಜೀವನ ನಡೆಸಬೇಕೆಂಬ ಮಹಾದಾಸೆಯನ್ನಿಟ್ಟು ತನ್ನ ಕನಸನ್ನು ಪೋಣಿಸುತ್ತಿದ್ದ ಪ್ರೇಮ್. ಆದರೆ 'ತಾನೊಂದು ಬಗೆದರೆ ವಿಧಿಯೊಂದು ಬಗೆಯಿತು' ಎಂಬಂತೆ ಜೀವನದ ಪಯಣದಲ್ಲಿ ಕಂಡ ಕನಸೆಲ್ಲ ನುಚ್ಚುನೂರಾಗಿತ್ತು. ದಾರದಲ್ಲಿ ಪೋಣಿಸಿದ ಮುತ್ತಿನ ಮಾಲೆ ತುಂಡಾಗಿ ಚದುರಿತ್ತು. ಹಲವಾರು ಜನರಿಗೆ ಅನ್ನವಿತ್ತು ಹಲವಾರು ಮಂದಿಗೆ ಸಂಬಳ ಕೊಡುತ್ತಿದ್ದ ಕೈ ಖಾಲಿಯಾಗಿತ್ತು. ಹೋದ ಹಣ ಹಿಂತಿರುಗಿ ಬರಬಹುದೆಂಬ ವಿಶ್ವಾಸ ತುಂಬುವವರಿಲ್ಲ. ಇದೇ ಬೇಗೆಯಲ್ಲಿ ಅತ್ತುಕರೆದು ಕೆಲವು ದಿನಗಳು ಉರುಳಿತು. ಆದರೆ ಮನಸ್ಸು ಶಾಂತವಾಗಲಿಲ್ಲ. ಕೈಯಲ್ಲಿ ಉಳಿದ ಹಣ ಕ್ರಮೇಣ ಕರಗುತ್ತಾ ಬರುತ್ತಿತ್ತು. ಯಾವುದೇ ಕೆಲಸ ಮಾಡಲು ಮನಸ್ಸಿಲ್ಲ, ಯಾರಿಗಾಗಿ ಮಾಡಲಿ, ತನ್ನವರೆಂಬವರು ಯಾರು ಇಲ್ಲ, ಜೊತೆ ಸಾಗಲು ಒಟ್ಟಿಗೆ ಯಾರೂ ಇಲ್ಲ, ಒಂಟಿ ಬಾಳು, ಹೇಳೋರು ಇಲ್ಲ ಕೇಳೋರು ಇಲ್ಲ, ಕೆಲಸ ಇಲ್ಲ ಕಾರ್ಯ ಇಲ್ಲ. ಈ ಒಂಟಿತನ ಪ್ರೇಮ್ ನನ್ನು ಕ್ರಮೇಣ ಜೀವನದ ಅಂತಿಮ ನಿರ್ದಾರ ತೆಗೆದುಕೊಳ್ಳುವಲ್ಲಿಗೆ ಕೊಂಡೊಯ್ಯಿತು. ಒಂದು ದಿನ ತನ್ನ ಜೀವನದಲ್ಲಿ ನಡೆದ ಎಲ್ಲಾ ವಿಚಾರವನ್ನು ಕಥೆಯ ರೂಪದಲ್ಲಿ ಬರೆದು, ಮುಂಬಯಿಯ ಪ್ರತಿಷ್ಟಿತ ದೈನಿಕ 'ಕರ್ನಾಟಕ ಮಲ್ಲ'ಕ್ಕೆ ಕಳುಹಿಸಿ, ಅಚಲ ನಿರ್ದಾರ ಮಾಡಿ, ವಾಶಿಯಲ್ಲಿರುವ ಬ್ರಿಜ್ ಗೆ  ತಲುಪಿದ ಪ್ರೇಮ್. ಇನ್ನು ಜೀವನ ಸಾಕು ಎಂದು ತೀರ್ಮಾನಿಸಿ ಬ್ರಿಜ್ ನಿಂದ ಹಾರಿ ತನ್ನ ಬದುಕಿಗೆ ಪೂರ್ಣವಿರಾಮ ಕೊಟ್ಟ ಪ್ರೇಮ್. ಇದನ್ನು ಕಂಡ ದಾರಿಹೋಕರು ಪೋಲೀಸ್ ಇಲಾಖೆಗೆ ಕರೆಮಾಡಿ ಪ್ರೇಮ್ ದೇಹ ಮೇಲೆ ಎತ್ತುವಲ್ಲಿಗೆ ಅವನ ಉಸಿರು ನಿಂತು ಹೋಗಿತ್ತು. ಪ್ರಕಾಶಮಾನವಾಗಿ ಬೆಳಗಬೇಕಾದ ಜ್ಯೋತಿ ನಂದಿ ಹೋಗಿತ್ತು. ಇದಾದ ಎರಡು ದಿನಗಳ ನಂತರ ರವಿವಾರ ಕರ್ನಾಟಕ ಮಲ್ಲದಲ್ಲಿ ಪ್ರಕಟವಾದ ಪ್ರೇಮ್ ನ ಕಥೆ ಓದಿ ಅವನ ಮಿತ್ರರ ಕಣ್ಣಲ್ಲಿ ಕಣ್ಣೀರು ಜಿನುಗುತ್ತಿತ್ತು. 

ರಚನೆ: ಶಶಿಕುಮಾರ್ ವಿ. ಕುಲಾಲ್   

No comments:

Post a Comment