Monday, July 29, 2013

ಒಲವೇ ಓ ನನ್ನೊಲವೇ

ಒಲವೇ ಓ ನನ್ನೊಲವೇ
ಮನವನು ಕಲಕಿ, ಪ್ರೀತಿಯ ಕಲಿಸಿ,
ಈ ಬಾಳಿನಾ ಅಂದವ ಹೆಚ್ಚಿಸಿದೆ
ಮಮತೆಯ ಸುಧೆಯ ನೀ ಹರಿಸಿದೆ
ಒಲವೇ ಓ ನನ್ನೊಲವೇ

ಬಿರುಗಾಳಿಗೆ ಸಿಲುಕಿ ದಾರ ಕಡಿದ ಪಟಕೆ
ಆಸರೆ ನೀ ನೀಡಿದೆ, ಚೈತನ್ಯ ತುಂಬಿದೆ
ಎಲ್ಲಾ ಶೂನ್ಯವೆಂದು ಹೊರಟ ಈ ದೇಹಕೆ
ಆಸೆ ತುಂಬಿದೆ, ಬದುಕಲು ಕಲಿಸಿದೆ
ಒಲವೇ ಓ ನನ್ನೊಲವೇ

ಎಷ್ಟೊಂದು ಸುಂದರ ಒಡನಾಟ ನಿನ್ನ
ಕನಸಲಿ ಕಾಡುವ ನೋಟ ನಿನ್ನ
ಕಾದಿಹೆ ಈ ಮನ ಬೆರೆತು ನಿನ್ನ
ಸಾಗಲು ಕಾಲಚಕ್ರದಿ,
ಜೊತೆಗೂಡಿ ಬಾಳೆಂಬ ರಥದಿ
ಒಲವೇ ಓ ನನ್ನೊಲವೇ

ರಚನೆ: ಶಶಿಕುಮಾರ್ ವಿ. ಕುಲಾಲ್   

Friday, July 26, 2013

ಆ ದಿನದ ನೆನಪು

ನಿನ್ನೊಂದಿಗೆ ಕಳೆದ ಆ ದಿನದ ನೆನಪು
ಪ್ರೀತಿಸುವ ಹಕ್ಕಿಗಳು ಜೊತೆಗೂಡಿದಾ ನೆನಪು
ಸೃಷ್ಟಿಕರ್ತನು ಸೇರಿಸಿದ ಪರಿಶುದ್ದ ಪ್ರೇಮ
ಕಲ್ಮಶವಿಲ್ಲದ ಮನಗಳ ಆ ಮಧುರ ಸಮ್ಮಿಲನ

ಪ್ರಕೃತಿಯ ಹಸಿರಿನಲಿ ನಮ್ಮಿಲನವಾದಾಗ
ತಣ್ಣನೆ ಗಾಳಿಯಲಿ ಮನವೆರಡು ಬೆರೆತಾಗ
ಬಂಡೆಕಲ್ಲೆ ನಮಗೆ ಸಿಂಹಾಸನವಾದಾಗ
ಹಕ್ಕಿಗಳ ಇಂಚರವೆ ನಮಗೆ ಸಂಗೀತವಾದಾಗ

ಹರಿಯುತಿದ್ದ ತೊರೆಯ ನೀರೆಮಗೆ ಹರಸಿದಾಗ
ಗಾಳಿಗುದುರಿದ ಪುಷ್ಪಗಳೇ ಅಭಿಷೇಕವಾದಾಗ
ಕೈಯಲ್ಲಿ ನಿನ್ನ ಮುಖ ಕಮಲವ ಹಿಡಿದು ನಿನ್ನ ಕಣ್ಣಲ್ಲಿ ಕಣ್ಣು ಸೇರಿಸಿದಾಗ
ನೇವರಿಸಿ ನಿನ್ನ ಕೇಶವ ಪ್ರೇಮಸುಧೆಯ ನಾ ಹರಿಸಿದಾಗ

ಮೈ ನಿನ್ನ ಕಂಪಿಸಲು ನನ್ನ ಹೆಗಲಲಿ ನೀ ತಲೆಯಿಟ್ಟಾಗ
ಭುಜವ ಹಿಡಿದು ಪ್ರೀತಿಯಿಂದ ಬರಸೆಳೆದು ಆಲಂಗಿಸಿದಾಗ
ಮುಂದಲೆಗೆ ಮಮತೆಯಿಂದ ಚುಂಬಿಸಿದಾಗ
ಗುಲಾಬಿ ಕೆನ್ನೆಗೆ ನಿನ್ನ ಸಿಹಿ ಮುತ್ತ ನೀಡಿದಾಗ
ತಡೆಯಲಾರದೆ ನಿನ್ನ ತುಟಿಗೆ ನಾ ತುಟಿಯ ಸೇರಿಸಿದಾಗ

ಮೊದಲ ಸ್ಪರ್ಶಕೆ ನೀ ಕಂಪಿಸಿ ಕುಳಿತಾಗ
ನೀ ನೀಡಿದ ಚುಂಬನಕೆ ಮೂಗೆರಡು ಮೀಟಿದಾಗ
ನೆನೆ ನೆನೆದು ನೀನು ಮನಬಿಚ್ಚಿ ನಕ್ಕಾಗ
ನಿನ್ನ ಶಿರವನು ನನ್ನ ಎದೆಯಲ್ಲಿ ಒತ್ತಿದಾಗ

ಚಳಿಯಲ್ಲೂ ಬಿಸಿಯಾದ ನಿನ್ನುಸಿರ ನೆನೆದಾಗ
ವರುಣನು ಹರ್ಷದಿ ನಮಗೆ ಹಾರೈಸಿದಾಗ
ಕಾಮಕ್ಕೆ ಜಾಗವಿಲ್ಲದ ಈ ಮಧುರ ಪ್ರೇಮ
ಉಸಿರೆರಡು ಬೆರೆತಂತ ಆ ದಿನವ ಮರೆಯಲಾರೆ ನಾನು
                                                 ಜನುಮ ಜನುಮ

ರಚನೆ: ಶಶಿಕುಮಾರ್ ವಿ. ಕುಲಾಲ್   

Saturday, July 20, 2013

ಹರಿಯುತಿರ ಜಲಪಾತದಂತೆ

ಹರಿಯುತಿರ ಜಲಪಾತದಂತೆ
ಶುಭ್ರದಿ ಮಿನುಗುವ ನಿನ್ನ ಉಡುಗೆ
ಬಳ್ಳಿಯು ಮಾಮರವ ಸುತ್ತಿದಂತೆ
ನನ್ನ ತೋಳನು ಹಿಡಿದು ನಡೆದ ಆ ಗಳಿಗೆ

ಕೇಶವ ನೇವರಿಸಲು ನಿನ್ನ
ಆಸೆಯ ಮಿಂಚು ಹೊಳೆಯಿತು ಕಣ್ಣಲ್ಲಿ
ತುಟಿಯಂಚಿನಲಿ ಮೂಡಿತು ನಗುವು
ಶೀತಲ ಚಂದಿರನಂತ ನಿನ್ನ ಮೊಗದಲ್ಲಿ

ಕದ್ದು ಮುಚ್ಚಿ ನೀ ನನ್ನ ಕಂಡಾಗ
ಮನಸ್ಸಲ್ಲಿ ಪ್ರೇಮರಾಗ ಮೀಟಿತಾಗ
ಹರಿಣಿಯಂತೆ ಸೆಳೆವ ನಿನ್ನ ಅಂದ ಸವಿದಾಗ
ನಿನ್ನ ಸ್ಪರ್ಶದಿ ಬೆರೆತು ಈ ಜಗವ ಮರೆತಾಗ

ಕನಸಿನ ಚಿತ್ತಾರದಿ ನಾ ಕಂಡ ಚೆಲುವೆ
ಬಾಳಿನ ಪುಟದಲ್ಲಿ ಒಂದಾಗು ಒಲವೆ
ಪ್ರೀತಿಯ ಪುಷ್ಪಗಳ ನಿನಗೆ ಅರ್ಪಿಸುವೆ
ಹೃದಯದ ದೇಗುಲದಿ ನಿತ್ಯ ಪೂಜಿಸುವೆ

ರಚನೆ: ಶಶಿಕುಮಾರ್ ವಿ. ಕುಲಾಲ್   

Friday, July 19, 2013

ಕಿವಿಯಲ್ಲಿ ಪಿಸುರಿದೆ

ಕಿವಿಯಲ್ಲಿ ಪಿಸುರಿದೆ ನೀ
ಪ್ರೀತಿ ಎಂಬ ಎರಡಕ್ಷರವ
ರೋಮಾಂಚನವಾಯಿತು ಈ ಮನವು
ಕೇಳಿದಾಗ ನಿನ್ನ ಮಧುರ ಸ್ವರವ

ಜೊತೆಗೂಡಿ ನಡೆದಾಗ
ನಿನ್ನ ಕೈಯ ಸ್ಪರ್ಶವಾದಾಗ
ಏನೋ ಒಂದು ಕಂಪನ
ಮನವೆರಡು ಬೆರೆತಂತ ಆ ಕ್ಷಣ

ಹೆಗಲಲ್ಲಿ ಕೈಯಿಟ್ಟು ನಿನ್ನ ಬರಸೆಳೆದಾಗ
ನೀ ನನ್ನ ನಡು ಹಿಡಿದು ಅಪ್ಪಿ ತಬ್ಬಿದಾಗ
ನನ್ನ ಕಣ್ಣಿಗೆ ನೀ ಕಣ್ಣು ಸೇರಿಸದಾದೆ
ನಾಚಿ ನೀರಾಗಿ, ಎದೆಬಡಿತ ಜೋರಾಗಿ, ಬಿಸಿಯುಸಿರು ಹಿತವಾಗಿ
ನನ್ನ ಎದೆಯಲಿ ನೀ ಅವಿತು ಹೋದೆ

ಏಕೆಂದು ತಿಳಿಯದು ದಿನವಿಡೀ ನಿನ್ನ ಚಿಂತೆ
ಓಡುವ ಮನವನ್ನು
ಹಾರುವ ಕಣ್ಣುಗಳನ್ನು
ನೀ ತಡೆದು ನಿಲ್ಲಿಸಿದೆ
ಪ್ರೀತಿಯೆಂಬ ದಾರದಲ್ಲಿ ಬಂದಿಸಿ
ಪ್ರೇಮ ಸುಧೆಯ ಹರಿಸಿದೆ

ರಚನೆ: ಶಶಿಕುಮಾರ್ ವಿ. ಕುಲಾಲ್   

Tuesday, July 16, 2013

ಮೇಘಗಳ ಲೋಕದಿಂದ

ಮೇಘಗಳ ಲೋಕದಿಂದ ಧರೆಗಿಳಿದ ಚೆಲುವೆ
ಅಂತರಂಗದ ಕರೆಗೆ ಓಗೊಟ್ಟ ಒಲವೆ
ಹರಿವ ಜಲಪಾತದಂತೆ ಶುಭ್ರ ನಿನ್ನ ಮನವು
ತಂಗಾಳಿಯಂತೆ ಸನಿಹ ನೀ ಬರಲು ಹಿತವು

ಕಾಡಿದೆ ಈ ಮನವ ಪ್ರೀತಿಯ ಸಿಂಚನದಿ
ನೀಡಿದೆ ನೀ ಹರುಷ ನನ್ನ ಜೀವನದಿ
ಹರಿಸಿದೆ ಪ್ರೇಮಧಾರೆ ಮಾತಿನ ಮೋಡಿಯಲಿ
ತುಂಬಿದೆ ಉಲ್ಲಾಸ ನಿನ್ನಯ ಸ್ಪರ್ಶದಲಿ

ಸುಮವರಳಿದಂತೆ ನೀನು ಕಿಲಕಿಲನೆ ನಕ್ಕಾಗ
ನಾ ಸೋತೆ ನಿನ್ನ ಆ ಚೆಲುವ ಕಂಡಾಗ
ಕಾಡಿಗೆಯ ಕಣ್ಣನ್ನು ನೋಡಲೆಷ್ಟು ಚಂದ
ಭಾವನೆಗಳು ಬೆರೆತಾಗ ತುಂಬಿದೆ ಆನಂದ

ರಚನೆ: ಶಶಿಕುಮಾರ್ ವಿ. ಕುಲಾಲ್ 

Wednesday, July 10, 2013

ಹಸಿರು ಸೀರೆ ಉಟ್ಟಾಗ

ಭುವಿಯಂತೆ ನೀ ಕಂಡೆ
ಉಟ್ಟಾಗ ಹಸಿರಿನಾ ಸೀರೆ
ಹರಿವರ್ಣದಿ ಕಂಗೊಳಿಸಿದೆ
ನನ್ನ ಮನ ಕದ್ದ ಚತುರೆ

ಚಂದಿರನ ಮೊಗದಲ್ಲಿ
ನಯನಗಳೆಂಬ ಕಮಲಗಳು
ನಗುವಲ್ಲಿ ನಿನ್ನ ಕಂಡೆ
ಬಾಳಿನಾ ಕನಸುಗಳು

ಕುತ್ತಿಗೆಯ ಸರದಲ್ಲಿ
ನನ್ನ ಪ್ರೀತಿಯ ಬಯಕೆಗಳು
ಪಳಪಳನೆ ಮಿನುಗುತಿರುವ
ಸ್ವರ್ಣದ ಬಳೆಗಳು

ಲಜ್ಜೆಯಿಂದ ನಾಚಿರುವೆ
ಬಳುಕುತಾ ನೀ ಬರಲು
ಜಗವ ಮರೆತು ಮರುಳಾದೆ
ಸನಿಹ ನನ್ನ ನೀ ಬರಲು

ರಚನೆ: ಶಶಿಕುಮಾರ್ ವಿ. ಕುಲಾಲ್ 

Tuesday, July 9, 2013

ಹೇಗೆ ಇರಲಿ

ಹೇಗೆ ಇರಲಿ ನಿನ್ನಿಂದ ದೂರ
ಒಂದೊಂದು ನಿಮಿಷ ಆಗಿದೆ ವರುಷ
ನೀ ಹೊರಟೆಯಲ್ಲೆ ದಾರಿ ಊರ
ನಿನ್ನ ನೋಡದೆ ಚಡಪಡಿಸಿದೆ ಈ ಮನ ಪ್ರತಿ ನಿಮಿಷ

ನನ್ನ ವೇದನೆ ನೀ ಯಾಕೆ ಅರಿಯದಾದೆ
ಒಂದು ಕ್ಷಣವೂ ದೂರ ಇರದಾದೆನೆ
ಪ್ರೀತಿ ಅರಳಿಸಿ ನನ್ನಯ ಮನದಲಿ
ಸ್ಪಂದಿಸದಾದೆ ಯಾಕೆ ತಿಳಿಯದಾದೆನೆ

ಹೃದಯ ಅತ್ತು ಕರೆದಿದೆ ನಿನ್ನ
ಅದರ ಕೂಗು ಕೇಳದೆ ಚಿನ್ನ
ನುಡಿಯ ಕೇಳದೆ ಕಿವಿಗಳು ನನ್ನ
ಕಾದಿದೆ ದೂರದ್ವನಿಯ ಸ್ವರವನ್ನ

ರಚನೆ: ಶಶಿಕುಮಾರ್ ವಿ. ಕುಲಾಲ್ 

Monday, July 8, 2013

ಸವಿ ಸವಿ ನೆನಪಿನ ಈ ಓಲೆ

ಸವಿ ಸವಿ ನೆನಪಿನ ಈ ಓಲೆ
ಪ್ರೀತಿಯ ಗೆಳತಿಯ ಹೆಸರಿನಲೆ
ಹಾಡಾಗಿ ಹರಿದಿದೆ ಹೃದಯದಿಂದ
ಭಾವಗಳು ಬೆರೆತಂತ ದಿನದಿಂದ

ತೋರಣವ ಕಟ್ಟಿರುವೆ ಕನಸುಗಳ
ಜ್ಯೋತಿಯ ಬೆಳಗಿರುವೆ ಆಸೆಗಳ
ಸುಮಗಳ ಹಾಸಿರುವೆ ಹಾದಿಯಲಿ
ಸಾಗೋಣ ಜೊತೆಯಾಗಿ ಜೀವನದಲಿ

ನಿನ್ನ ನೆನಪಲೆ ಕವಿಯಾದೆ
ಕವನಗಳ ಧಾರೆ ಹರಿಯಿಸಿದೆ
ಹೃದಯವ ತೆರೆದು ಕಾದಿರುವೆ
ಓಡೋಡಿ ಬಂದು ಸೇರು ನನ್ನೊಲವೆ

ಕೊರಳಲ್ಲಿ ನಿನ್ನ ಮಾಲೆಯಾಗಿರುವೆ
ಕೈಗಳ ಬಳೆಗಳ ನಾದವಾಗಿರುವೆ
ಉಸಿರಲ್ಲಿ ನಿನ್ನ ನಾ ಬೆರೆಯುವೆ
ಹೃದಯದಾ ಬಡಿತ ನಾನಾಗುವೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

Sunday, July 7, 2013

ಎಂದು ಕಂಡೆನಾ ನಿನ್ನ ಕಂಗಳ

ಎಂದು ಕಂಡೆನಾ ನಾನು ನಿನ್ನ ಕಂಗಳ
ಮರುಳಾದೆ ನಾ ಅದರ ಅಂದಕೆ
ಘಾಸಿಯಾಯಿತು ನನ್ನ ಮನವು
ಬಾಣದಂತ ಹರಿತ ನೋಟಕೆ

ಪ್ರೀತಿ ಚಿಗುರಿತು ನೀ ಬೀರಲು ಹೂವಿನ ನಗೆ
ಮುತ್ತಿನಂತ ನಿನ್ನ ಆ ಕಿರುನಗೆ
ಮಿಂಚಂತೆ ನಾಟಿತು ನನ್ನ ಹೃದಯಕೆ
ಸರಿಗಮವು ಒಟ್ಟಾಗಿ ಚೆಲ್ಲಿದಾ ನಗೆ

ಗುಲಾಬಿ ಕಮಲದ ಅಂದ ನಿನ್ನ ಕೆನ್ನೆಯೂ
ದಾಳಿಂಬೆ ಹೂವಿನ ದಳವು ನಿನ್ನ ತುಟಿಯೂ
ಜೇನಿನ ಮಧುರ ರಸವ ಅದಕೆ ಸವರಿದೆ
ಸಿಹಿ ಮುತ್ತ ನೀಡಿದಾಗ ಸ್ವರ್ಗ ಇಲ್ಲಿದೆ

ರಚನೆ: ಶಶಿಕುಮಾರ್ ವಿ. ಕುಲಾಲ್ 

Friday, July 5, 2013

ಕಡಲ ತೀರದಿ ಜೊತೆ ಕುಳಿತು

ಕಡಲ ತೀರದಿ ಜೊತೆ ಕುಳಿತು
       ಮುಳುಗುತಿರುವ ರವಿತೇಜ ನೋಡುವಾಸೆ
ತಬ್ಬಿ ಹಿಡಿದು ನನ್ನ ತೋಳಲಿ
       ಪ್ರಣಯ ಸುಖವ ನೀಡುವಾಸೆ
ಹಾಲುಗೆನ್ನೆಯ ಮುದ್ದುಮಾಡಿ
       ಕೆಂದುಟಿಯ ಚುಂಬಿಸುವಾಸೆ
ಪ್ರೀತಿ ಸಾಗರದಿ ತೇಲಿ ತೇಲಿ
       ಜೋಡಿ ಹಕ್ಕಿಗಳಂತೆ ಹಾರುವಾಸೆ

ಜೇನಿನ ಅಭಿಷೇಕ ಮಾಡಿ
      ಸಿಹಿಮುತ್ತ ನೀಡುವಾಸೆ
ಹಾಲಿನ ಸುಧೆಯಲ್ಲಿ
     ನಿನ್ನ ಸೇರಿ ಈಜುವಾಸೆ
ಗುಲಾಬಿಯ ಎಸಳಿಂದ
     ನಿನ್ನ ಶೃಂಗಾರ ಮಾಡುವಾಸೆ
ಮುಂಜಾನೆಯ ಮಂಜಲ್ಲಿ
     ನಿನ್ನ ಕೂಡಿ ನಲಿವ ಆಸೆ

ಬಳಸಿ ನಿನ್ನ ನಡುವ
     ಮಗುವಂತೆ ಎತ್ತಿ ಆಡಿಸುವಾಸೆ
ನಿನ್ನ ಗೆಜ್ಜೆ ನಾದದಲಿ
     ಮನಬಿಚ್ಚಿ ನರ್ತಿಸುವಾಸೆ
ತೊಡೆಯ ಮೇಲೆ ತಲೆಯಿಟ್ಟು
     ಒಂದು ಸಾರಿ ಮಲಗುವಾಸೆ
ನಾನು ನೀನು ಒಟ್ಟು ಸೇರಿ
    ಈ ಜಗವ ಗೆಲ್ಲುವಾಸೆ

ರಚನೆ: ಶಶಿಕುಮಾರ್ ವಿ. ಕುಲಾಲ್

Thursday, July 4, 2013

ಬದುಕಲಾರೆನು

ಏನಾಗಿದೆ ನನಗೆ ಯಾಕೀಗಾಗಿದೆ
ಮನಸ್ಸು ಎಲ್ಲಿದೆ ನನ್ನ ಧ್ಯಾನವೆಲ್ಲಿದೆ
ಓಡುತ್ತಿರುವುದು ಮನಸ್ಸು ನಿನ್ನ ಹಿಂದೆಯೆ
ಹಿಡಿದು ನಿಲ್ಲಿಸು ಅದನ್ನು ಪ್ರೀತಿಯಿಂದಲೇ

ಕನಸುಗಾರನಾಗಿ ನನ್ನ ಮಾಡಿದೆ
ನಿರ್ಜೀವ ದೇಹಕೆ ಉಸಿರು ತುಂಬಿದೆ
ತಾಳಲಾರೆನು ನಿನ್ನ ಮರೆಯಲಾರೆನು
ನಿನ್ನ ಸೇರದೆ ಹೋದರೆ ಬದುಕಲಾರೆನು

ಪ್ರೀತಿ ಪ್ರೇಮ ಬರೀ ಭ್ರಮೆ ಎಂದು ಕೊಂಡೆನೆ
ನಿನ್ನ ಕಣ್ಣ ನೋಟದಿ ನಿಜವೆಂದು ಕಂಡೆನೆ
ಎಲ್ಲಿ ನೋಡಿದರು ನಿನ್ನ ಚಹರೆ ಕಂಡಿಹೆ
ನನ್ನೆದೆ ಗೂಡಲಿ ನೀನು ಸ್ಥಿರವಾಗಿಹೆ

ರಚನೆ: ಶಶಿಕುಮಾರ್ ವಿ. ಕುಲಾಲ್

Wednesday, July 3, 2013

ಹೊಸ ಉಲ್ಲಾಸ ಮೂಡಿದೆ

ಹೊಸ ಉಲ್ಲಾಸ ಮೂಡಿದೆ ಮನದಲಿ
ಚಿಗುರಿದೆ ಬಯಕೆಯು ಮೊಗ್ಗುಗಳಲಿ
ತುಂಬಿದೆ ಎನಗೆ ಮಾತಲ್ಲಿ ಹುರುಪು
ಚೆಲ್ಲಿದೆ  ಬಾಳಲ್ಲಿ ಬಣ್ಣಗಳ ಹೊಳಪು

ನಿನ್ನ ಸ್ಪರ್ಶದಲಿ ಏನಿದೆ ಮಾಯೆಯೊ
ಮಳೆ ಬಿದ್ದು ತಂಪಾದ ಧರೆಯಾದೆನಲ್ಲೆ
ಚಿಲಿಪಿಲಿ ಹಕ್ಕಿಗಳ ಇಂಚರವು ನೀ ನಗಲು
ದುಃಖವ ಮರೆಸಿ ನೀ ತಂದೆ ಸುಖದ ಹೊನಲು

ಎಂದೆಂದು ನೀನಿರು ಉಸಿರಾಗಿ ನನ್ನುಸಿರಲ್ಲಿ
ನನ್ನ ಹೃದಯ ಬಡಿದಾಗ ಅದರ ಬಡಿತ ಆಗು ಅಲ್ಲಿ
ಪ್ರೀತಿಯ ದೇಗುಲ ಬೆಳಗು ಬಂದಿಲ್ಲಿ
ಜೀವವ ತುಂಬು ನನ್ನಯ ಬಾಳಲ್ಲಿ

ರಚನೆ: ಶಶಿಕುಮಾರ್ ವಿ. ಕುಲಾಲ್