Wednesday, August 21, 2013

ಎಷ್ಟೊಂದು ಮಧುರ

ಎಷ್ಟೊಂದು ಮಧುರ ಈ ಪ್ರೀತಿಯ ಭಾವನೆಗಳು
ಕನಸುಗಳು ನನಸಾಗುವ ಆ ಸುಂದರ ಕ್ಷಣಗಳು
ನಯನಗಳಲಿ ಕಾತರತೆ ನಿನ್ನ ಕಾಣಲು
ನುಡಿಯಲ್ಲಿ ಹರಿದಿದೆ ಪ್ರೀತಿಯ ರಸಧಾರೆಗಳು

ಬದುಕು ಕಟ್ಟಲು ಸೇರುತಿದೆ ಎರಡು ಜೀವಗಳು
ಸಂಗೀತ ಲಹರಿಯಲಿ ಹಾರುತಿಹ ಜೋಡಿ ಹಕ್ಕಿಗಳು
ಮನಸ್ಸನ್ನು ಸೆಳೆವಂತ ನಿನ್ನ ಸುಂದರ ಕಣ್ಣುಗಳು
ಕೇಶವನ್ನು ನೇವರಿಸಲು ಮೂಡಿದೆ ಆತ್ಮೀಯ ಭಾವನೆಗಳು

ಒಂಟಿ ಜೀವಕೆ ನೀನಿತ್ತ ಆಸೆಯ ಚಿಗುರುಗಳು
ಬಾಳದಾರಿಯಲಿ ಪುಟಿದೆದ್ದ ಸುಂದರ ಬಯಕೆಗಳು
ಬಾ ಒಲವೆ ಬೇಗ ಇನ್ನೇಕೆ ನಿಂತಿರುವೆ
ಹೃದಯದಾ ಅರಮನೆಯ ಕದತೆರೆದು ಕಾದಿರುವೆ

ರಚನೆ: ಶಶಿಕುಮಾರ್ ವಿ. ಕುಲಾಲ್   

Tuesday, August 13, 2013

ಇರಲಾರೆ ನಾನು

ಇರಲಾರೆ ನಾನು ನಿನ್ನಿಂದ ದೂರ
ಮನದಲ್ಲಿ ಮೂಡಿದೆ ನೆನಪುಗಳ ಸಮರ
ಕ್ಷಣ ಕ್ಷಣವು ಕಂಡಿದೆ ನನಗೆ ವರುಷಗಳಂತೆ
ಬಯಕೆಗಳು ಮೂಡಿದೆ ಸಾಗರದ ಅಲೆಗಳಂತೆ

ಪ್ರತಿಯುಸಿರಿನಲ್ಲೂ ಬೆರೆತಿರುವೆ ನೀನು
ಹೃದಯಾಂತರಾಳದಿ ನೆಲೆಸಿರುವೆ ನೀನು
ಯಾವ ಜನ್ಮದ ಪುಣ್ಯವೊ ಅರಿಯದಾದೆ ನಾನು
ವಂದಿಪೆ ಆ ದೇವಗೆ ಮನಸಾರೆ ನಾನು

ಪ್ರೀತಿಯು ಏನೆಂಬುದ ಕಲಿಸಿದೆ ನೀನು
ಎಂದೆಂದು ಆಗಿರಲಿ ನಮ್ಮ ಬಾಳು ಹಾಲು ಜೇನು
ಮಮತೆಯ ಧಾರೆಯನು ಹರಿಸುತಿರು ಹೀಗೆ
ಪ್ರೀತಿಯ ಸುಧೆಯಲ್ಲಿ ತೇಲಿಸುವೆ ಪ್ರತಿಗಳಿಗೆ

ರಚನೆ: ಶಶಿಕುಮಾರ್ ವಿ. ಕುಲಾಲ್   

ಈ ಮನದಿ ನೀ ಬೆರೆತೆ

ಈ ಮನದಿ ನೀ ಬೆರೆತೆ
ನದಿಯೊಂದು ಸಾಗರವ ಸೇರಿದಂತೆ
ತುಂಬಿದೆ ಕನಸುಗಳಿಗೆ ಚೈತನ್ಯವ
ಆಗಸದಿ ಹಾರುವ ಹಕ್ಕಿಗಳಂತೆ

ಕಾತರದಿ ಕಾಯುತಿಹೆ ನಿನ್ನ ಸೇರಲು
ಬಾಳೆಂಬ ಸುಮಧುರ ಚಿತ್ರಣವ ಬಿಡಿಸಲು
ನನ್ನ ಲಹರಿಗೆ ನಿನ್ನ ಸ್ವರ ಬೆರೆಸಲು
ಪ್ರೀತಿಯ ದೇಗುಲದಿ ಜ್ಯೋತಿಯ ಬೆಳಗಿಸಲು

ನಾ ತಿಳಿಯದಾದೆ ಯಾಕಿಷ್ಟು ತುಡಿತ
ಮನ ಹುಚ್ಚಾಗಿ ಹಾರಿದೆ ಅದಕ್ಕಿಲ್ಲ ಹಿಡಿತ
ಮಾಡಿದೆ ನೀನು ಏನೊಂದು ಮೋಡಿ
ನಾವಾಗುವ ಬಾಳಲ್ಲಿ ಜನುಮದಾ ಜೋಡಿ

ರಚನೆ: ಶಶಿಕುಮಾರ್ ವಿ. ಕುಲಾಲ್   

Monday, July 29, 2013

ಒಲವೇ ಓ ನನ್ನೊಲವೇ

ಒಲವೇ ಓ ನನ್ನೊಲವೇ
ಮನವನು ಕಲಕಿ, ಪ್ರೀತಿಯ ಕಲಿಸಿ,
ಈ ಬಾಳಿನಾ ಅಂದವ ಹೆಚ್ಚಿಸಿದೆ
ಮಮತೆಯ ಸುಧೆಯ ನೀ ಹರಿಸಿದೆ
ಒಲವೇ ಓ ನನ್ನೊಲವೇ

ಬಿರುಗಾಳಿಗೆ ಸಿಲುಕಿ ದಾರ ಕಡಿದ ಪಟಕೆ
ಆಸರೆ ನೀ ನೀಡಿದೆ, ಚೈತನ್ಯ ತುಂಬಿದೆ
ಎಲ್ಲಾ ಶೂನ್ಯವೆಂದು ಹೊರಟ ಈ ದೇಹಕೆ
ಆಸೆ ತುಂಬಿದೆ, ಬದುಕಲು ಕಲಿಸಿದೆ
ಒಲವೇ ಓ ನನ್ನೊಲವೇ

ಎಷ್ಟೊಂದು ಸುಂದರ ಒಡನಾಟ ನಿನ್ನ
ಕನಸಲಿ ಕಾಡುವ ನೋಟ ನಿನ್ನ
ಕಾದಿಹೆ ಈ ಮನ ಬೆರೆತು ನಿನ್ನ
ಸಾಗಲು ಕಾಲಚಕ್ರದಿ,
ಜೊತೆಗೂಡಿ ಬಾಳೆಂಬ ರಥದಿ
ಒಲವೇ ಓ ನನ್ನೊಲವೇ

ರಚನೆ: ಶಶಿಕುಮಾರ್ ವಿ. ಕುಲಾಲ್   

Friday, July 26, 2013

ಆ ದಿನದ ನೆನಪು

ನಿನ್ನೊಂದಿಗೆ ಕಳೆದ ಆ ದಿನದ ನೆನಪು
ಪ್ರೀತಿಸುವ ಹಕ್ಕಿಗಳು ಜೊತೆಗೂಡಿದಾ ನೆನಪು
ಸೃಷ್ಟಿಕರ್ತನು ಸೇರಿಸಿದ ಪರಿಶುದ್ದ ಪ್ರೇಮ
ಕಲ್ಮಶವಿಲ್ಲದ ಮನಗಳ ಆ ಮಧುರ ಸಮ್ಮಿಲನ

ಪ್ರಕೃತಿಯ ಹಸಿರಿನಲಿ ನಮ್ಮಿಲನವಾದಾಗ
ತಣ್ಣನೆ ಗಾಳಿಯಲಿ ಮನವೆರಡು ಬೆರೆತಾಗ
ಬಂಡೆಕಲ್ಲೆ ನಮಗೆ ಸಿಂಹಾಸನವಾದಾಗ
ಹಕ್ಕಿಗಳ ಇಂಚರವೆ ನಮಗೆ ಸಂಗೀತವಾದಾಗ

ಹರಿಯುತಿದ್ದ ತೊರೆಯ ನೀರೆಮಗೆ ಹರಸಿದಾಗ
ಗಾಳಿಗುದುರಿದ ಪುಷ್ಪಗಳೇ ಅಭಿಷೇಕವಾದಾಗ
ಕೈಯಲ್ಲಿ ನಿನ್ನ ಮುಖ ಕಮಲವ ಹಿಡಿದು ನಿನ್ನ ಕಣ್ಣಲ್ಲಿ ಕಣ್ಣು ಸೇರಿಸಿದಾಗ
ನೇವರಿಸಿ ನಿನ್ನ ಕೇಶವ ಪ್ರೇಮಸುಧೆಯ ನಾ ಹರಿಸಿದಾಗ

ಮೈ ನಿನ್ನ ಕಂಪಿಸಲು ನನ್ನ ಹೆಗಲಲಿ ನೀ ತಲೆಯಿಟ್ಟಾಗ
ಭುಜವ ಹಿಡಿದು ಪ್ರೀತಿಯಿಂದ ಬರಸೆಳೆದು ಆಲಂಗಿಸಿದಾಗ
ಮುಂದಲೆಗೆ ಮಮತೆಯಿಂದ ಚುಂಬಿಸಿದಾಗ
ಗುಲಾಬಿ ಕೆನ್ನೆಗೆ ನಿನ್ನ ಸಿಹಿ ಮುತ್ತ ನೀಡಿದಾಗ
ತಡೆಯಲಾರದೆ ನಿನ್ನ ತುಟಿಗೆ ನಾ ತುಟಿಯ ಸೇರಿಸಿದಾಗ

ಮೊದಲ ಸ್ಪರ್ಶಕೆ ನೀ ಕಂಪಿಸಿ ಕುಳಿತಾಗ
ನೀ ನೀಡಿದ ಚುಂಬನಕೆ ಮೂಗೆರಡು ಮೀಟಿದಾಗ
ನೆನೆ ನೆನೆದು ನೀನು ಮನಬಿಚ್ಚಿ ನಕ್ಕಾಗ
ನಿನ್ನ ಶಿರವನು ನನ್ನ ಎದೆಯಲ್ಲಿ ಒತ್ತಿದಾಗ

ಚಳಿಯಲ್ಲೂ ಬಿಸಿಯಾದ ನಿನ್ನುಸಿರ ನೆನೆದಾಗ
ವರುಣನು ಹರ್ಷದಿ ನಮಗೆ ಹಾರೈಸಿದಾಗ
ಕಾಮಕ್ಕೆ ಜಾಗವಿಲ್ಲದ ಈ ಮಧುರ ಪ್ರೇಮ
ಉಸಿರೆರಡು ಬೆರೆತಂತ ಆ ದಿನವ ಮರೆಯಲಾರೆ ನಾನು
                                                 ಜನುಮ ಜನುಮ

ರಚನೆ: ಶಶಿಕುಮಾರ್ ವಿ. ಕುಲಾಲ್   

Saturday, July 20, 2013

ಹರಿಯುತಿರ ಜಲಪಾತದಂತೆ

ಹರಿಯುತಿರ ಜಲಪಾತದಂತೆ
ಶುಭ್ರದಿ ಮಿನುಗುವ ನಿನ್ನ ಉಡುಗೆ
ಬಳ್ಳಿಯು ಮಾಮರವ ಸುತ್ತಿದಂತೆ
ನನ್ನ ತೋಳನು ಹಿಡಿದು ನಡೆದ ಆ ಗಳಿಗೆ

ಕೇಶವ ನೇವರಿಸಲು ನಿನ್ನ
ಆಸೆಯ ಮಿಂಚು ಹೊಳೆಯಿತು ಕಣ್ಣಲ್ಲಿ
ತುಟಿಯಂಚಿನಲಿ ಮೂಡಿತು ನಗುವು
ಶೀತಲ ಚಂದಿರನಂತ ನಿನ್ನ ಮೊಗದಲ್ಲಿ

ಕದ್ದು ಮುಚ್ಚಿ ನೀ ನನ್ನ ಕಂಡಾಗ
ಮನಸ್ಸಲ್ಲಿ ಪ್ರೇಮರಾಗ ಮೀಟಿತಾಗ
ಹರಿಣಿಯಂತೆ ಸೆಳೆವ ನಿನ್ನ ಅಂದ ಸವಿದಾಗ
ನಿನ್ನ ಸ್ಪರ್ಶದಿ ಬೆರೆತು ಈ ಜಗವ ಮರೆತಾಗ

ಕನಸಿನ ಚಿತ್ತಾರದಿ ನಾ ಕಂಡ ಚೆಲುವೆ
ಬಾಳಿನ ಪುಟದಲ್ಲಿ ಒಂದಾಗು ಒಲವೆ
ಪ್ರೀತಿಯ ಪುಷ್ಪಗಳ ನಿನಗೆ ಅರ್ಪಿಸುವೆ
ಹೃದಯದ ದೇಗುಲದಿ ನಿತ್ಯ ಪೂಜಿಸುವೆ

ರಚನೆ: ಶಶಿಕುಮಾರ್ ವಿ. ಕುಲಾಲ್   

Friday, July 19, 2013

ಕಿವಿಯಲ್ಲಿ ಪಿಸುರಿದೆ

ಕಿವಿಯಲ್ಲಿ ಪಿಸುರಿದೆ ನೀ
ಪ್ರೀತಿ ಎಂಬ ಎರಡಕ್ಷರವ
ರೋಮಾಂಚನವಾಯಿತು ಈ ಮನವು
ಕೇಳಿದಾಗ ನಿನ್ನ ಮಧುರ ಸ್ವರವ

ಜೊತೆಗೂಡಿ ನಡೆದಾಗ
ನಿನ್ನ ಕೈಯ ಸ್ಪರ್ಶವಾದಾಗ
ಏನೋ ಒಂದು ಕಂಪನ
ಮನವೆರಡು ಬೆರೆತಂತ ಆ ಕ್ಷಣ

ಹೆಗಲಲ್ಲಿ ಕೈಯಿಟ್ಟು ನಿನ್ನ ಬರಸೆಳೆದಾಗ
ನೀ ನನ್ನ ನಡು ಹಿಡಿದು ಅಪ್ಪಿ ತಬ್ಬಿದಾಗ
ನನ್ನ ಕಣ್ಣಿಗೆ ನೀ ಕಣ್ಣು ಸೇರಿಸದಾದೆ
ನಾಚಿ ನೀರಾಗಿ, ಎದೆಬಡಿತ ಜೋರಾಗಿ, ಬಿಸಿಯುಸಿರು ಹಿತವಾಗಿ
ನನ್ನ ಎದೆಯಲಿ ನೀ ಅವಿತು ಹೋದೆ

ಏಕೆಂದು ತಿಳಿಯದು ದಿನವಿಡೀ ನಿನ್ನ ಚಿಂತೆ
ಓಡುವ ಮನವನ್ನು
ಹಾರುವ ಕಣ್ಣುಗಳನ್ನು
ನೀ ತಡೆದು ನಿಲ್ಲಿಸಿದೆ
ಪ್ರೀತಿಯೆಂಬ ದಾರದಲ್ಲಿ ಬಂದಿಸಿ
ಪ್ರೇಮ ಸುಧೆಯ ಹರಿಸಿದೆ

ರಚನೆ: ಶಶಿಕುಮಾರ್ ವಿ. ಕುಲಾಲ್